19 : 1
كٓهيعٓصٓ
ಕಾಫ್ ಹಾ ಯಾ ಐನ್ ಸ್ವಾದ್.
19 : 2
ذِكْرُ رَحْمَتِ رَبِّكَ عَبْدَهُۥ زَكَرِيَّآ
ಇದು ನಿಮ್ಮ ಪರಿಪಾಲಕನು (ಅಲ್ಲಾಹು) ತನ್ನ ದಾಸ ಝಕರಿಯ್ಯಾರಿಗೆ ದಯಪಾಲಿಸಿದ ದಯೆಯ ಉಲ್ಲೇಖವಾಗಿದೆ.
19 : 3
إِذْ نَادَىٰ رَبَّهُۥ نِدَآءً خَفِيًّا
ಅವರು (ಝಕರಿಯ್ಯಾ) ತನ್ನ ಪರಿಪಾಲಕನನ್ನು (ಅಲ್ಲಾಹನನ್ನು) ರಹಸ್ಯವಾಗಿ ಕರೆದು ಪ್ರಾರ್ಥಿಸಿದ ಸಂದರ್ಭ.
19 : 4
قَالَ رَبِّ إِنِّى وَهَنَ ٱلْعَظْمُ مِنِّى وَٱشْتَعَلَ ٱلرَّأْسُ شَيْبًا وَلَمْ أَكُنۢ بِدُعَآئِكَ رَبِّ شَقِيًّا
ಅವರು ಹೇಳಿದರು: “ನನ್ನ ಪರಿಪಾಲಕನೇ! ನನ್ನ ಮೂಳೆಗಳು ದುರ್ಬಲವಾಗಿವೆ. ವಯಸ್ಸಾಗಿ ತಲೆಯು ಬೆಳ್ಳಗಾಗಿದೆ. ನನ್ನ ಪರಿಪಾಲಕನೇ! ನಿನ್ನಲ್ಲಿ ಪ್ರಾರ್ಥಿಸಿ ನಾನು ಯಾವತ್ತೂ ನಿರಾಶನಾಗಿಲ್ಲ.
19 : 5
وَإِنِّى خِفْتُ ٱلْمَوَٰلِىَ مِن وَرَآءِى وَكَانَتِ ٱمْرَأَتِى عَاقِرًا فَهَبْ لِى مِن لَّدُنكَ وَلِيًّا
ನಿಶ್ಚಯವಾಗಿಯೂ, ನನ್ನ ಮರಣಾನಂತರ ನನ್ನ ಕುಟುಂಬದವರ ಬಗ್ಗೆ ನಾನು ಭಯವಾಗುತ್ತಿದೆ. ನನ್ನ ಪತ್ನಿ ಬಂಜೆಯಾಗಿದ್ದಾಳೆ. ಆದ್ದರಿಂದ ನನಗೆ ನಿನ್ನ ಕಡೆಯಿಂದ ಒಬ್ಬ ಉತ್ತರಾಧಿಕಾರಿಯನ್ನು ಕರುಣಿಸು.
19 : 6
يَرِثُنِى وَيَرِثُ مِنْ ءَالِ يَعْقُوبَ ۖ وَٱجْعَلْهُ رَبِّ رَضِيًّا
ಅವನು ನನ್ನ ವಾರಸುದಾರ ಮತ್ತು ಯಾಕೂಬ್ ಕುಟುಂಬದ ವಾರಸುದಾರನಾಗಿರಲಿ. ಓ ನನ್ನ ಪರಿಪಾಲಕನೇ! ಅವನನ್ನು ಸಂತೃಪ್ತ ದಾಸನನ್ನಾಗಿ ಮಾಡು.”
19 : 7
يَـٰزَكَرِيَّآ إِنَّا نُبَشِّرُكَ بِغُلَـٰمٍ ٱسْمُهُۥ يَحْيَىٰ لَمْ نَجْعَل لَّهُۥ مِن قَبْلُ سَمِيًّا
“ಓ ಝಕರಿಯ್ಯಾ! ನಿಶ್ಚಯವಾಗಿಯೂ ನಾವು ನಿಮಗೆ ಒಬ್ಬ ಪುತ್ರನ ಜನನದ ಬಗ್ಗೆ ಶುಭವಾರ್ತೆ ನೀಡುತ್ತಿದ್ದೇವೆ. ಅವನ ಹೆಸರು ಯಹ್ಯಾ. ಇದಕ್ಕಿಂತ ಮೊದಲು ನಾವು ಯಾರಿಗೂ ಆ ಹೆಸರನ್ನು ನೀಡಿಲ್ಲ.”
19 : 8
قَالَ رَبِّ أَنَّىٰ يَكُونُ لِى غُلَـٰمٌ وَكَانَتِ ٱمْرَأَتِى عَاقِرًا وَقَدْ بَلَغْتُ مِنَ ٱلْكِبَرِ عِتِيًّا
ಝಕರಿಯ್ಯಾ ಹೇಳಿದರು: “ಓ ನನ್ನ ಪರಿಪಾಲಕನೇ! ನನಗೊಬ್ಬ ಪುತ್ರ ಉಂಟಾಗುವುದು ಹೇಗೆ? ನನ್ನ ಪತ್ನಿ ಬಂಜೆಯಾಗಿದ್ದಾಳೆ. ನಾನಂತೂ ವಯೋವೃದ್ಧನಾಗಿ ಬಿಟ್ಟಿದ್ದೇನೆ.”
19 : 9
قَالَ كَذَٰلِكَ قَالَ رَبُّكَ هُوَ عَلَىَّ هَيِّنٌ وَقَدْ خَلَقْتُكَ مِن قَبْلُ وَلَمْ تَكُ شَيْـًٔا
ಅಲ್ಲಾಹು ಹೇಳಿದನು: “ಅದು ಹಾಗೆಯೇ ಆಗಿದೆ. ನಿಮ್ಮ ಪರಿಪಾಲಕನು (ಅಲ್ಲಾಹು) ಹೇಳುತ್ತಾನೆ: ಅದು ನನಗೆ ಅತ್ಯಂತ ಸುಲಭವಾಗಿದೆ. ಇದಕ್ಕೆ ಮೊದಲು, ನೀವು ಅಸ್ತಿತ್ವದಲ್ಲೇ ಇರದಿದ್ದಾಗ ನಾನು ನಿಮ್ಮನ್ನು ಸೃಷ್ಟಿಸಿದ್ದೇನೆ.”
19 : 10
قَالَ رَبِّ ٱجْعَل لِّىٓ ءَايَةً ۚ قَالَ ءَايَتُكَ أَلَّا تُكَلِّمَ ٱلنَّاسَ ثَلَـٰثَ لَيَالٍ سَوِيًّا
ಝಕರಿಯ್ಯಾ ಹೇಳಿದರು: “ಓ ನನ್ನ ಪರಿಪಾಲಕನೇ! ನನಗೊಂದು ದೃಷ್ಟಾಂತವನ್ನು ನಿಶ್ಚಯಿಸಿಕೊಡು.” ಅಲ್ಲಾಹು ಹೇಳಿದನು: “ನೀವು ಸರಿಯಾಗಿದ್ದರೂ ಸಹ ಮೂರು ರಾತ್ರಿಗಳವರೆಗೆ ಜನರೊಡನೆ ಮಾತನಾಡಲು ನಿಮಗೆ ಸಾಧ್ಯವಾಗದಿರುವುದು ನಿಮಗಿರುವ ದೃಷ್ಟಾಂತವಾಗಿದೆ.”
19 : 11
فَخَرَجَ عَلَىٰ قَوْمِهِۦ مِنَ ٱلْمِحْرَابِ فَأَوْحَىٰٓ إِلَيْهِمْ أَن سَبِّحُوا۟ بُكْرَةً وَعَشِيًّا
ನಂತರ ಅವರು ಪ್ರಾರ್ಥನಾ ಕೊಠಡಿಯಿಂದ ಜನರ ಬಳಿಗೆ ತೆರಳಿ, “ನೀವು ಮುಂಜಾನೆ ಮತ್ತು ಸಂಜೆ ಅಲ್ಲಾಹನ ಪರಿಶುದ್ಧತೆಯನ್ನು ಕೊಂಡಾಡಿರಿ” ಎಂದು ಸನ್ನೆ ಮಾಡಿ ಹೇಳಿದರು.
19 : 12
يَـٰيَحْيَىٰ خُذِ ٱلْكِتَـٰبَ بِقُوَّةٍ ۖ وَءَاتَيْنَـٰهُ ٱلْحُكْمَ صَبِيًّا
“ಓ ಯಹ್ಯಾ! ಗ್ರಂಥವನ್ನು ಬಿಗಿಯಾಗಿ ಹಿಡಿದುಕೊಳ್ಳಿ.” ನಾವು ಅವರಿಗೆ ಬಾಲ್ಯದಲ್ಲೇ ವಿವೇಕವನ್ನು ನೀಡಿದೆವು.
19 : 13
وَحَنَانًا مِّن لَّدُنَّا وَزَكَوٰةً ۖ وَكَانَ تَقِيًّا
ಅವರಿಗೆ ನಮ್ಮ ಕಡೆಯ ವಾತ್ಸಲ್ಯ ಮತ್ತು ಪರಿಶುದ್ಧತೆಯನ್ನೂ ನೀಡಿದೆವು. ಅವರು ದೇವಭಯವುಳ್ಳವರಾಗಿದ್ದರು.
19 : 14
وَبَرًّۢا بِوَٰلِدَيْهِ وَلَمْ يَكُن جَبَّارًا عَصِيًّا
ಅವರು ತಂದೆ-ತಾಯಿಗೆ ಒಳಿತು ಮಾಡುತ್ತಿದ್ದರು. ಅವರು ನಿರಂಕುಶರೋ ವಿಧೇಯತೆಯಿಲ್ಲದವರೋ ಆಗಿರಲಿಲ್ಲ.
19 : 15
وَسَلَـٰمٌ عَلَيْهِ يَوْمَ وُلِدَ وَيَوْمَ يَمُوتُ وَيَوْمَ يُبْعَثُ حَيًّا
ಅವರು ಜನಿಸಿದ ದಿನ, ನಿಧನವಾಗುವ ದಿನ ಮತ್ತು ಅವರಿಗೆ ಪುನಃ ಜೀವ ನೀಡಿ ಎಬ್ಬಿಸಲಾಗುವ ದಿನ ಅವರ ಮೇಲೆ ಶಾಂತಿಯಿರುವುದು.
19 : 16
وَٱذْكُرْ فِى ٱلْكِتَـٰبِ مَرْيَمَ إِذِ ٱنتَبَذَتْ مِنْ أَهْلِهَا مَكَانًا شَرْقِيًّا
ಈ ಗ್ರಂಥದಲ್ಲಿ ಮರ್ಯಮರ ಬಗ್ಗೆ ತಿಳಿಸಿರಿ. ಅವರು ತಮ್ಮ ಮನೆಯವರಿಂದ ದೂರವಾಗಿ ಪೂರ್ವದಲ್ಲಿರುವ ಒಂದು ಸ್ಥಳಕ್ಕೆ ತೆರಳಿದ ಸಂದರ್ಭ.
19 : 17
فَٱتَّخَذَتْ مِن دُونِهِمْ حِجَابًا فَأَرْسَلْنَآ إِلَيْهَا رُوحَنَا فَتَمَثَّلَ لَهَا بَشَرًا سَوِيًّا
ಜನರು ನೋಡದಿರಲು ಅವರು ಒಂದು ಪರದೆಯನ್ನು ಹಾಕಿಕೊಂಡರು. ನಂತರ ನಾವು ಅವರ ಬಳಿಗೆ ನಮ್ಮ ಆತ್ಮವನ್ನು (ಜಿಬ್ರೀಲರನ್ನು) ಕಳುಹಿಸಿದೆವು. ಜಿಬ್ರೀಲ್ ಅವರ ಮುಂದೆ ಪೂರ್ಣ ಮನುಷ್ಯ ರೂಪದಲ್ಲಿ ಪ್ರತ್ಯಕ್ಷರಾದರು.
19 : 18
قَالَتْ إِنِّىٓ أَعُوذُ بِٱلرَّحْمَـٰنِ مِنكَ إِن كُنتَ تَقِيًّا
ಮರ್ಯಮ್ ಹೇಳಿದರು: “ನಾನು ನಿನ್ನ ಕೆಡುಕಿನಿಂದ ಪರಮ ದಯಾಮಯನಲ್ಲಿ (ಅಲ್ಲಾಹನಲ್ಲಿ) ಅಭಯಕೋರುತ್ತೇನೆ. ನೀನು ದೇವಭಯವುಳ್ಳವನಾದರೆ (ನನ್ನಿಂದ ದೂರವಾಗು).”[1]
19 : 19
قَالَ إِنَّمَآ أَنَا۠ رَسُولُ رَبِّكِ لِأَهَبَ لَكِ غُلَـٰمًا زَكِيًّا
ಜಿಬ್ರೀಲ್ ಹೇಳಿದರು: “ನಾನು ನಿಮ್ಮ ಪರಿಪಾಲಕನ (ಅಲ್ಲಾಹನ) ದೂತನಾಗಿದ್ದೇನೆ. ನಿಮಗೆ ಒಬ್ಬ ಪರಿಶುದ್ಧ ಪುತ್ರನನ್ನು ನೀಡಲು ನಾನು ಬಂದಿದ್ದೇನೆ.”
19 : 20
قَالَتْ أَنَّىٰ يَكُونُ لِى غُلَـٰمٌ وَلَمْ يَمْسَسْنِى بَشَرٌ وَلَمْ أَكُ بَغِيًّا
ಮರ್ಯಮ್ ಹೇಳಿದರು: “ನನಗೆ ಪುತ್ರ ಉಂಟಾಗುವುದು ಹೇಗೆ? ಯಾವುದೇ ಮನುಷ್ಯನು ನನ್ನನ್ನು ಮುಟ್ಟಿಲ್ಲ. ನಾನು ಶೀಲಗೆಟ್ಟವಳೂ ಅಲ್ಲ.”
19 : 21
قَالَ كَذَٰلِكِ قَالَ رَبُّكِ هُوَ عَلَىَّ هَيِّنٌ ۖ وَلِنَجْعَلَهُۥٓ ءَايَةً لِّلنَّاسِ وَرَحْمَةً مِّنَّا ۚ وَكَانَ أَمْرًا مَّقْضِيًّا
ಜಿಬ್ರೀಲ್ ಹೇಳಿದರು: “ಸಂಗತಿ ನೀವು ಹೇಳಿದಂತೆಯೇ ಆಗಿದೆ. ಆದರೆ, ಅದು ನನಗೆ ಬಹಳ ಸುಲಭವಾಗಿದೆಯೆಂದು ನಿಮ್ಮ ಪರಿಪಾಲಕನು (ಅಲ್ಲಾಹು) ಹೇಳುತ್ತಾನೆ. ನಾವು ಆ ಮಗುವನ್ನು ಮನುಷ್ಯರಿಗೆ ಒಂದು ದೃಷ್ಟಾಂತವಾಗಿ ಮಾಡಲು ಬಯಸುತ್ತೇವೆ. ಆ ಮಗು ನಮ್ಮ ಕಡೆಯ ವಿಶೇಷ ದಯೆಯಾಗಿದ್ದಾರೆ. ಇದು ತೀರ್ಮಾನಿಸಲಾದ ಸಂಗತಿಯಾಗಿದೆ.”
19 : 22
۞ فَحَمَلَتْهُ فَٱنتَبَذَتْ بِهِۦ مَكَانًا قَصِيًّا
ಮರ್ಯಮ್ ಮಗುವಿನ ಗರ್ಭ ಧರಿಸಿದರು. ನಂತರ ಆ ಗರ್ಭದೊಂದಿಗೆ ವಿದೂರ ಸ್ಥಳದಲ್ಲಿ ವಾಸಿಸತೊಡಗಿದರು.
19 : 23
فَأَجَآءَهَا ٱلْمَخَاضُ إِلَىٰ جِذْعِ ٱلنَّخْلَةِ قَالَتْ يَـٰلَيْتَنِى مِتُّ قَبْلَ هَـٰذَا وَكُنتُ نَسْيًا مَّنسِيًّا
ನಂತರ ಹೆರಿಗೆ ನೋವು ಅವರನ್ನು ಖರ್ಜೂರದ ಮರದ ಬಳಿಗೆ ತಲುಪಿಸಿತು. ಅವರು ಹೇಳಿದರು: “ಇದಕ್ಕಿಂತ ಮೊದಲೇ ನಾನು ತೀರಿ ಹೋಗಿದ್ದರೆ ಮತ್ತು ಜನರ ನೆನಪಿನಿಂದ ನಾನು ಸಂಪೂರ್ಣ ಮಾಸಿ ಹೋಗಿದ್ದರೆ ಎಷ್ಟು ಚೆನ್ನಾಗಿತ್ತು!”[1]
19 : 24
فَنَادَىٰهَا مِن تَحْتِهَآ أَلَّا تَحْزَنِى قَدْ جَعَلَ رَبُّكِ تَحْتَكِ سَرِيًّا
ಆಗ ಮರ್ಯಮರ ತಳಭಾಗದಿಂದ ಒಂದು ಕೂಗು ಕೇಳಿಸಿತು: “ಬೇಸರ ಪಡಬೇಡಿ! ನಿಮ್ಮ ಪರಿಪಾಲಕನು (ಅಲ್ಲಾಹು) ನಿಮ್ಮ ತಳಭಾಗದಲ್ಲಿ ಒಂದು ತೊರೆಯನ್ನು ಹರಿಸಿದ್ದಾನೆ.
19 : 25
وَهُزِّىٓ إِلَيْكِ بِجِذْعِ ٱلنَّخْلَةِ تُسَـٰقِطْ عَلَيْكِ رُطَبًا جَنِيًّا
ಖರ್ಜೂರದ ಮರವನ್ನು ನಿಮ್ಮ ಕಡೆಗೆ ಎಳೆದು ಕುಲುಕಿರಿ. ಆಗ ಅದು ನಿಮಗೆ ಹಣ್ಣಾದ ತಾಜಾ ಖರ್ಜೂರವನ್ನು ಬೀಳಿಸುತ್ತದೆ.
19 : 26
فَكُلِى وَٱشْرَبِى وَقَرِّى عَيْنًا ۖ فَإِمَّا تَرَيِنَّ مِنَ ٱلْبَشَرِ أَحَدًا فَقُولِىٓ إِنِّى نَذَرْتُ لِلرَّحْمَـٰنِ صَوْمًا فَلَنْ أُكَلِّمَ ٱلْيَوْمَ إِنسِيًّا
ನೀವು ತಿನ್ನಿರಿ, ಕುಡಿಯಿರಿ ಮತ್ತು ಕಣ್ಮನ ತಣಿಸಿರಿ. ನೀವು ಯಾವುದೇ ಒಬ್ಬ ಮನುಷ್ಯನನ್ನು ಕಂಡರೆ, “ನಾನು ಪರಮ ದಯಾಮಯನಿಗೆ (ಅಲ್ಲಾಹನಿಗೆ) ಉಪವಾಸದ ಹರಕೆ ಹೊತ್ತಿದ್ದೇನೆ. ಆದ್ದರಿಂದ ಇಂದು ನಾನು ಯಾವುದೇ ವ್ಯಕ್ತಿಯೊಡನೆ ಮಾತನಾಡುವುದಿಲ್ಲ” ಎಂದು ಹೇಳಿರಿ.
19 : 27
فَأَتَتْ بِهِۦ قَوْمَهَا تَحْمِلُهُۥ ۖ قَالُوا۟ يَـٰمَرْيَمُ لَقَدْ جِئْتِ شَيْـًٔا فَرِيًّا
ನಂತರ ಅವರು ಆ ಮಗುವನ್ನು ಹಿಡಿದುಕೊಂಡು ತಮ್ಮ ಜನರ ಬಳಿಗೆ ಬಂದರು. ಜನರು ಹೇಳಿದರು: “ಓ ಮರ್ಯಮ್! ನೀನು ಬಹಳ ಕೆಟ್ಟ ಕೆಲಸವನ್ನು ಮಾಡಿದ್ದೀಯಾ.
19 : 28
يَـٰٓأُخْتَ هَـٰرُونَ مَا كَانَ أَبُوكِ ٱمْرَأَ سَوْءٍ وَمَا كَانَتْ أُمُّكِ بَغِيًّا
ಓ ಹಾರೂನರ ಸಹೋದರೀ! ನಿನ್ನ ತಂದೆ ಕೆಟ್ಟ ಮನುಷ್ಯನಾಗಿರಲಿಲ್ಲ. ನಿನ್ನ ತಾಯಿ ಶೀಲಗೆಟ್ಟ ಮಹಿಳೆಯಾಗಿರಲಿಲ್ಲ.”
19 : 29
فَأَشَارَتْ إِلَيْهِ ۖ قَالُوا۟ كَيْفَ نُكَلِّمُ مَن كَانَ فِى ٱلْمَهْدِ صَبِيًّا
ಆಗ ಮರ್ಯಮ್ ಮಗುವಿನ ಕಡೆಗೆ ಸನ್ನೆ ಮಾಡಿದರು. ಜನರು ಕೇಳಿದರು: “ತೊಟ್ಟಿಲಲ್ಲಿರುವ ಮಗುವಿನೊಂದಿಗೆ ನಾವು ಮಾತನಾಡುವುದು ಹೇಗೆ?”
19 : 30
قَالَ إِنِّى عَبْدُ ٱللَّهِ ءَاتَىٰنِىَ ٱلْكِتَـٰبَ وَجَعَلَنِى نَبِيًّا
ಮಗು ಹೇಳಿತು: “ನಾನು ಅಲ್ಲಾಹನ ದಾಸ. ಅವನು ನನಗೆ ಗ್ರಂಥವನ್ನು ನೀಡಿದ್ದಾನೆ ಮತ್ತು ನನ್ನನ್ನು ಪ್ರವಾದಿಯಾಗಿ ಮಾಡಿದ್ದಾನೆ.
19 : 31
وَجَعَلَنِى مُبَارَكًا أَيْنَ مَا كُنتُ وَأَوْصَـٰنِى بِٱلصَّلَوٰةِ وَٱلزَّكَوٰةِ مَا دُمْتُ حَيًّا
ನಾನು ಎಲ್ಲೇ ಇದ್ದರೂ ಅವನು ನನ್ನನ್ನು ಸಮೃದ್ಧಿಯುಳ್ಳವನಾಗಿ ಮಾಡಿದ್ದಾನೆ. ನಾನು ಜೀವಂತವಿರುವ ಕಾಲದ ತನಕ ನಮಾಝ್ ಮಾಡಲು ಮತ್ತು ಝಕಾತ್ ನೀಡಲು ಅವನು ನನಗೆ ಆಜ್ಞಾಪಿಸಿದ್ದಾನೆ.
19 : 32
وَبَرًّۢا بِوَٰلِدَتِى وَلَمْ يَجْعَلْنِى جَبَّارًا شَقِيًّا
ನನ್ನ ತಾಯಿಗೆ ಒಳಿತು ಮಾಡಲು (ನನಗೆ ಆಜ್ಞಾಪಿಸಿದ್ದಾನೆ). ಅವನು ನನ್ನನ್ನು ನಿರಂಕುಶ ಅಥವಾ ನತದೃಷ್ಟನನ್ನಾಗಿ ಮಾಡಿಲ್ಲ.
19 : 33
وَٱلسَّلَـٰمُ عَلَىَّ يَوْمَ وُلِدتُّ وَيَوْمَ أَمُوتُ وَيَوْمَ أُبْعَثُ حَيًّا
ನಾನು ಜನಿಸಿದ ದಿನ, ನಿಧನನಾಗುವ ದಿನ ಮತ್ತು ನನಗೆ ಜೀವ ನೀಡಿ ಎಬ್ಬಿಸಲಾಗುವ ದಿನ ನನ್ನ ಮೇಲೆ ಶಾಂತಿಯಿರುವುದು.”
19 : 34
ذَٰلِكَ عِيسَى ٱبْنُ مَرْيَمَ ۚ قَوْلَ ٱلْحَقِّ ٱلَّذِى فِيهِ يَمْتَرُونَ
ಅವರೇ ಮರ್ಯಮರ ಮಗ ಈಸಾ (ಯೇಸು). ಜನರು ಸಂಶಯಪಡುತ್ತಿರುವ ಆ ಸತ್ಯ ವಚನವು ಇದೇ ಆಗಿದೆ.
19 : 35
مَا كَانَ لِلَّهِ أَن يَتَّخِذَ مِن وَلَدٍ ۖ سُبْحَـٰنَهُۥٓ ۚ إِذَا قَضَىٰٓ أَمْرًا فَإِنَّمَا يَقُولُ لَهُۥ كُن فَيَكُونُ
ಒಬ್ಬ ಪುತ್ರನಿರುವುದು ಅಲ್ಲಾಹನಿಗೆ ಯೋಗ್ಯವಾದುದಲ್ಲ. ಅವನು ಪರಿಶುದ್ಧನು. ಅವನು ಯಾವುದೇ ವಿಷಯವನ್ನು ತೀರ್ಮಾನಿಸಿದರೆ ಅದರೊಂದಿಗೆ “ಉಂಟಾಗು” ಎಂದು ಮಾತ್ರ ಹೇಳುತ್ತಾನೆ. ತಕ್ಷಣ ಅದು ಉಂಟಾಗುತ್ತದೆ!
19 : 36
وَإِنَّ ٱللَّهَ رَبِّى وَرَبُّكُمْ فَٱعْبُدُوهُ ۚ هَـٰذَا صِرَٰطٌ مُّسْتَقِيمٌ
(ಈಸಾ ಹೇಳಿದರು): “ನಿಶ್ಚಯವಾಗಿಯೂ ಅಲ್ಲಾಹನೇ ನನ್ನ ಮತ್ತು ನಿಮ್ಮ ಪರಿಪಾಲಕನು. ಆದ್ದರಿಂದ ಅವನನ್ನು ಮಾತ್ರ ಆರಾಧಿಸಿರಿ. ಇದೇ ನೇರವಾದ ಮಾರ್ಗ.”
19 : 37
فَٱخْتَلَفَ ٱلْأَحْزَابُ مِنۢ بَيْنِهِمْ ۖ فَوَيْلٌ لِّلَّذِينَ كَفَرُوا۟ مِن مَّشْهَدِ يَوْمٍ عَظِيمٍ
ನಂತರ ಅವರಲ್ಲಿನ ಗುಂಪುಗಳು ಪರಸ್ಪರ ಭಿನ್ನಮತ ತಳೆದರು.[1] ಆದ್ದರಿಂದ, ಒಂದು ಭಯಾನಕ ದಿನದ ಸಾನಿಧ್ಯದಿಂದಾಗಿ ಸತ್ಯನಿಷೇಧಿಗಳಿಗೆ ವಿನಾಶ ಕಾದಿದೆ.
19 : 38
أَسْمِعْ بِهِمْ وَأَبْصِرْ يَوْمَ يَأْتُونَنَا ۖ لَـٰكِنِ ٱلظَّـٰلِمُونَ ٱلْيَوْمَ فِى ضَلَـٰلٍ مُّبِينٍ
ಅವರು ನಮ್ಮ ಬಳಿಗೆ ಬರುವ ಆ ದಿನದಂದು ಅವರ ಕೇಳುವ ಶಕ್ತಿ ಮತ್ತು ದೃಷ್ಟಿ ಎಷ್ಟು ಚೆನ್ನಾಗಿರುತ್ತದೆ! ಆದರೆ ಅಂದು ಆ ಅಕ್ರಮಿಗಳು ಸ್ಪಷ್ಟ ದುರ್ಮಾರ್ಗದಲ್ಲಿರುವರು.
19 : 39
وَأَنذِرْهُمْ يَوْمَ ٱلْحَسْرَةِ إِذْ قُضِىَ ٱلْأَمْرُ وَهُمْ فِى غَفْلَةٍ وَهُمْ لَا يُؤْمِنُونَ
(ಪ್ರವಾದಿಯವರೇ) ಆ ವಿಷಾದದ ದಿನದ (ಅಂತ್ಯದಿನದ) ಬಗ್ಗೆ ಅವರಿಗೆ ಎಚ್ಚರಿಕೆ ನೀಡಿರಿ. ಅಂದರೆ, ಎಲ್ಲಾ ವಿಷಯಗಳನ್ನು (ಅಂತಿಮವಾಗಿ) ತೀರ್ಮಾನಿಸಲಾಗುವ ಸಂದರ್ಭದ ಬಗ್ಗೆ. ಆದರೆ ಅವರು ನಿರ್ಲಕ್ಷ್ಯದಲ್ಲಿದ್ದಾರೆ. ಅವರು ವಿಶ್ವಾಸವಿಡುವುದಿಲ್ಲ.
19 : 40
إِنَّا نَحْنُ نَرِثُ ٱلْأَرْضَ وَمَنْ عَلَيْهَا وَإِلَيْنَا يُرْجَعُونَ
ನಿಶ್ಚಯವಾಗಿಯೂ ನಾವೇ ಭೂಮಿ ಮತ್ತು ಅದರಲ್ಲಿರುವ ಎಲ್ಲರ ಉತ್ತರಾಧಿಕಾರಿಗಳು. ಅವರನ್ನು ನಮ್ಮ ಬಳಿಗೇ ಮರಳಿಸಲಾಗುತ್ತದೆ.
19 : 41
وَٱذْكُرْ فِى ٱلْكِتَـٰبِ إِبْرَٰهِيمَ ۚ إِنَّهُۥ كَانَ صِدِّيقًا نَّبِيًّا
ಈ ಗ್ರಂಥದಲ್ಲಿ ಇಬ್ರಾಹೀಮರ ಬಗ್ಗೆ ತಿಳಿಸಿರಿ. ನಿಶ್ಚಯವಾಗಿಯೂ ಅವರು ಸತ್ಯವಂತರಾದ ಪ್ರವಾದಿಯಾಗಿದ್ದರು.
19 : 42
إِذْ قَالَ لِأَبِيهِ يَـٰٓأَبَتِ لِمَ تَعْبُدُ مَا لَا يَسْمَعُ وَلَا يُبْصِرُ وَلَا يُغْنِى عَنكَ شَيْـًٔا
ಅವರು ತಮ್ಮ ತಂದೆಯೊಡನೆ ಹೇಳಿದ ಸಂದರ್ಭ: “ಪ್ರೀತಿಯ ಅಪ್ಪಾ! ನೀವು ನಿಮ್ಮ ಮಾತನ್ನು ಕೇಳದ, ನಿಮ್ಮನ್ನು ನೋಡದ ಮತ್ತು ನಿಮಗೆ ಯಾವುದೇ ಉಪಕಾರ ಮಾಡದ ಈ ವಿಗ್ರಹಗಳನ್ನು ಏಕೆ ಆರಾಧಿಸುತ್ತೀರಿ?
19 : 43
يَـٰٓأَبَتِ إِنِّى قَدْ جَآءَنِى مِنَ ٱلْعِلْمِ مَا لَمْ يَأْتِكَ فَٱتَّبِعْنِىٓ أَهْدِكَ صِرَٰطًا سَوِيًّا
ಪ್ರೀತಿಯ ಅಪ್ಪಾ! ನಿಜವಾಗಿಯೂ ನಿಮ್ಮ ಬಳಿ ಇಲ್ಲದ ಜ್ಞಾನವು ನನ್ನ ಬಳಿಗೆ ಬಂದಿದೆ. ಆದ್ದರಿಂದ ನಾನು ಹೇಳುವಂತೆ ಕೇಳಿರಿ. ನಾನು ನಿಮಗೆ ಸರಿಯಾದ ಮಾರ್ಗವನ್ನು ತೋರಿಸುತ್ತೇನೆ.
19 : 44
يَـٰٓأَبَتِ لَا تَعْبُدِ ٱلشَّيْطَـٰنَ ۖ إِنَّ ٱلشَّيْطَـٰنَ كَانَ لِلرَّحْمَـٰنِ عَصِيًّا
ಪ್ರೀತಿಯ ಅಪ್ಪಾ! ಶೈತಾನನನ್ನು ಆರಾಧಿಸಬೇಡಿ. ಶೈತಾನನು ಪರಮ ದಯಾಳುವಿಗೆ (ಅಲ್ಲಾಹನಿಗೆ) ಅವಿಧೇಯನಾಗಿದ್ದಾನೆ.
19 : 45
يَـٰٓأَبَتِ إِنِّىٓ أَخَافُ أَن يَمَسَّكَ عَذَابٌ مِّنَ ٱلرَّحْمَـٰنِ فَتَكُونَ لِلشَّيْطَـٰنِ وَلِيًّا
ಪ್ರೀತಿಯ ಅಪ್ಪಾ! ಪರಮ ದಯಾಳುವಿನ (ಅಲ್ಲಾಹನ) ಯಾವುದಾದರೂ ಶಿಕ್ಷೆಯು ನಿಮ್ಮ ಮೇಲೆರಗಬಹುದೆಂದು ನನಗೆ ಭಯವಾಗುತ್ತಿದೆ. ಹಾಗೇನಾದರೂ ಆದರೆ ನೀವು ಶೈತಾನನ ಮಿತ್ರನಾಗಿ ಬಿಡುವಿರಿ.”
19 : 46
قَالَ أَرَاغِبٌ أَنتَ عَنْ ءَالِهَتِى يَـٰٓإِبْرَٰهِيمُ ۖ لَئِن لَّمْ تَنتَهِ لَأَرْجُمَنَّكَ ۖ وَٱهْجُرْنِى مَلِيًّا
ತಂದೆ ಹೇಳಿದನು: “ಇಬ್ರಾಹೀಮ್! ನೀನು ನನ್ನ ದೇವರುಗಳನ್ನು ತಿರಸ್ಕರಿಸುತ್ತಿರುವೆಯಾ? ನೀನು ಇದನ್ನು ನಿಲ್ಲಿಸದಿದ್ದರೆ ನಾನು ನಿನ್ನನ್ನು ಖಂಡಿತ ಕಲ್ಲೆಸೆದು ಓಡಿಸುವೆನು. ಹೋಗು! ಒಂದು ದೀರ್ಘಕಾಲದ ತನಕ ನನ್ನಿಂದ ದೂರವಿರು.”
19 : 47
قَالَ سَلَـٰمٌ عَلَيْكَ ۖ سَأَسْتَغْفِرُ لَكَ رَبِّىٓ ۖ إِنَّهُۥ كَانَ بِى حَفِيًّا
ಇಬ್ರಾಹೀಮ್ ಹೇಳಿದರು: “ನಿಮ್ಮ ಮೇಲೆ ಶಾಂತಿಯಿರಲಿ! ನಾನು ನಿಮಗೋಸ್ಕರ ನನ್ನ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಕ್ಷಮೆಯಾಚಿಸುತ್ತೇನೆ. ನಿಶ್ಚಯವಾಗಿಯೂ ಅವನಿಗೆ ನನ್ನ ಮೇಲೆ ಬಹಳ ಅನುಕಂಪವಿದೆ.
19 : 48
وَأَعْتَزِلُكُمْ وَمَا تَدْعُونَ مِن دُونِ ٱللَّهِ وَأَدْعُوا۟ رَبِّى عَسَىٰٓ أَلَّآ أَكُونَ بِدُعَآءِ رَبِّى شَقِيًّا
ನಾನು ನಿಮ್ಮನ್ನು ಮತ್ತು ಅಲ್ಲಾಹನ ಹೊರತಾಗಿ ನೀವು ಕರೆದು ಪ್ರಾರ್ಥಿಸುವವರನ್ನು ಬಿಟ್ಟು ಹೋಗುತ್ತಿದ್ದೇನೆ. ನಾನು ನನ್ನ ಪರಿಪಾಲಕನನ್ನು (ಅಲ್ಲಾಹನನ್ನು) ಮಾತ್ರ ಕರೆದು ಪ್ರಾರ್ಥಿಸುತ್ತೇನೆ. ನನ್ನ ಪರಿಪಾಲಕನನ್ನು (ಅಲ್ಲಾಹನನ್ನು) ಕರೆದು ಪ್ರಾರ್ಥಿಸಿದರೆ ನಾನೆಂದೂ ನತದೃಷ್ಟನಾಗುವುದಿಲ್ಲ.”
19 : 49
فَلَمَّا ٱعْتَزَلَهُمْ وَمَا يَعْبُدُونَ مِن دُونِ ٱللَّهِ وَهَبْنَا لَهُۥٓ إِسْحَـٰقَ وَيَعْقُوبَ ۖ وَكُلًّا جَعَلْنَا نَبِيًّا
ಅವರು ತಂದೆಯನ್ನು ಮತ್ತು ಅಲ್ಲಾಹನ ಹೊರತಾಗಿ ಅವರು ಆರಾಧಿಸುತ್ತಿದ್ದವರನ್ನು ಬಿಟ್ಟು ತೆರಳಿದಾಗ ನಾವು ಅವರಿಗೆ ಇಸ್‍ಹಾಕ್ (ಮಗ) ಮತ್ತು ಯಅ್‌ಕೂಬ್ (ಮೊಮ್ಮಗ)ರನ್ನು ದಯಪಾಲಿಸಿದೆವು. ಅವರೆಲ್ಲರನ್ನೂ ನಾವು ಪ್ರವಾದಿಗಳನ್ನಾಗಿ ಮಾಡಿದೆವು.
19 : 50
وَوَهَبْنَا لَهُم مِّن رَّحْمَتِنَا وَجَعَلْنَا لَهُمْ لِسَانَ صِدْقٍ عَلِيًّا
ನಾವು ಅವರಿಗೆ ನಮ್ಮ ದಯೆಯಿಂದ ಕರುಣಿಸಿದೆವು. ನಾವು ಅವರ ಕೀರ್ತಿಯನ್ನು ಉನ್ನತಗೊಳಿಸಿದೆವು.
19 : 51
وَٱذْكُرْ فِى ٱلْكِتَـٰبِ مُوسَىٰٓ ۚ إِنَّهُۥ كَانَ مُخْلَصًا وَكَانَ رَسُولًا نَّبِيًّا
ಈ ಗ್ರಂಥದಲ್ಲಿ ಮೂಸಾರ ಬಗ್ಗೆ ತಿಳಿಸಿರಿ. ನಿಜಕ್ಕೂ ಅವರು ನಿಷ್ಕಳಂಕರಾಗಿದ್ದರು. ಅವರು ಸಂದೇಶವಾಹಕರು ಮತ್ತು ಪ್ರವಾದಿಯಾಗಿದ್ದರು.
19 : 52
وَنَـٰدَيْنَـٰهُ مِن جَانِبِ ٱلطُّورِ ٱلْأَيْمَنِ وَقَرَّبْنَـٰهُ نَجِيًّا
ತೂರ್ ಪರ್ವತದ ಬಲಭಾಗದಿಂದ ನಾವು ಅವರನ್ನು ಕರೆದೆವು ಮತ್ತು ಆಪ್ತ ಸಂಭಾಷಣೆ ಮಾಡಲು ನಾವು ಅವರನ್ನು ಹತ್ತಿರಗೊಳಿಸಿದೆವು.
19 : 53
وَوَهَبْنَا لَهُۥ مِن رَّحْمَتِنَآ أَخَاهُ هَـٰرُونَ نَبِيًّا
ನಮ್ಮ ದಯೆಯಿಂದ ನಾವು ಅವರಿಗೆ ಅವರ ಸಹೋದರ ಹಾರೂನರನ್ನು ಪ್ರವಾದಿಯಾಗಿ ಮಾಡಿದೆವು.
19 : 54
وَٱذْكُرْ فِى ٱلْكِتَـٰبِ إِسْمَـٰعِيلَ ۚ إِنَّهُۥ كَانَ صَادِقَ ٱلْوَعْدِ وَكَانَ رَسُولًا نَّبِيًّا
ಈ ಗ್ರಂಥದಲ್ಲಿ ಇಸ್ಮಾಈಲರ ಬಗ್ಗೆ ತಿಳಿಸಿರಿ. ನಿಜಕ್ಕೂ ಅವರು ವಾಗ್ದಾನಗಳನ್ನು ನೆರವೇರಿಸುತ್ತಿದ್ದರು. ಅವರು ಸಂದೇಶವಾಹಕರು ಮತ್ತು ಪ್ರವಾದಿಯಾಗಿದ್ದರು.
19 : 55
وَكَانَ يَأْمُرُ أَهْلَهُۥ بِٱلصَّلَوٰةِ وَٱلزَّكَوٰةِ وَكَانَ عِندَ رَبِّهِۦ مَرْضِيًّا
ಅವರು ತಮ್ಮ ಮನೆಯವರಿಗೆ ನಮಾಝ್ ಮಾಡಲು ಮತ್ತು ಝಕಾತ್ ನೀಡಲು ಆಜ್ಞಾಪಿಸುತ್ತಿದ್ದರು. ಅವರು ತಮ್ಮ ಪರಿಪಾಲಕನ (ಅಲ್ಲಾಹನ) ಪ್ರೀತಿಗೆ ಪಾತ್ರರಾಗಿದ್ದರು.
19 : 56
وَٱذْكُرْ فِى ٱلْكِتَـٰبِ إِدْرِيسَ ۚ إِنَّهُۥ كَانَ صِدِّيقًا نَّبِيًّا
ಈ ಗ್ರಂಥದಲ್ಲಿ ಇದ್ರೀಸರ ಬಗ್ಗೆ ತಿಳಿಸಿರಿ. ನಿಜಕ್ಕೂ ಅವರು ಸತ್ಯವಂತ ಪ್ರವಾದಿಯಾಗಿದ್ದರು.
19 : 57
وَرَفَعْنَـٰهُ مَكَانًا عَلِيًّا
ನಾವು ಅವರನ್ನು ಉನ್ನತ ದರ್ಜೆಗೇರಿಸಿದೆವು.
19 : 58
أُو۟لَـٰٓئِكَ ٱلَّذِينَ أَنْعَمَ ٱللَّهُ عَلَيْهِم مِّنَ ٱلنَّبِيِّـۧنَ مِن ذُرِّيَّةِ ءَادَمَ وَمِمَّنْ حَمَلْنَا مَعَ نُوحٍ وَمِن ذُرِّيَّةِ إِبْرَٰهِيمَ وَإِسْرَٰٓءِيلَ وَمِمَّنْ هَدَيْنَا وَٱجْتَبَيْنَآ ۚ إِذَا تُتْلَىٰ عَلَيْهِمْ ءَايَـٰتُ ٱلرَّحْمَـٰنِ خَرُّوا۟ سُجَّدًا وَبُكِيًّا ۩
ಇವರೆಲ್ಲರೂ ಅಲ್ಲಾಹು ಅನುಗ್ರಹಿಸಿದ ಪ್ರವಾದಿಗಳಾಗಿದ್ದಾರೆ. ಅವರು ಆದಮರ ಸಂತಾನದಲ್ಲಿ, ನೂಹರೊಡನೆ ನಾವು ನಾವೆಯಲ್ಲಿ ಏರಿಸಿದವರಲ್ಲಿ ಮತ್ತು ಇಬ್ರಾಹೀಮ್ ಹಾಗೂ ಇಸ್ರಾಈಲರ ಸಂತಾನದಲ್ಲಿ ಸೇರಿದವರಾಗಿದ್ದಾರೆ. ಅವರೆಲ್ಲರೂ ನಾವು ಸನ್ಮಾರ್ಗದಲ್ಲಿ ಸೇರಿಸಿ ವಿಶೇಷವಾಗಿ ಆರಿಸಿದವರಲ್ಲಿ ಸೇರಿದವರಾಗಿದ್ದಾರೆ. ಅವರಿಗೆ ಪರಮ ದಯಾಮಯನ (ಅಲ್ಲಾಹನ) ವಚನಗಳನ್ನು ಓದಿಕೊಡಲಾದರೆ ಅವರು ಸಾಷ್ಟಾಂಗ ಮಾಡುತ್ತಾ ಅಳುತ್ತಾ ಬೀಳುತ್ತಾರೆ.
19 : 59
۞ فَخَلَفَ مِنۢ بَعْدِهِمْ خَلْفٌ أَضَاعُوا۟ ٱلصَّلَوٰةَ وَٱتَّبَعُوا۟ ٱلشَّهَوَٰتِ ۖ فَسَوْفَ يَلْقَوْنَ غَيًّا
ಅವರ ನಂತರ ಅವರ ಸ್ಥಾನದಲ್ಲಿ ಬೇರೊಂದು ತಲೆಮಾರು ಬಂತು. ಅವರು ನಮಾಝನ್ನು ಹಾಳು ಮಾಡಿದರು ಮತ್ತು ಸ್ವೇಚ್ಛೆಗಳನ್ನು ಹಿಂಬಾಲಿಸಿದರು. ಅವರು ತಮ್ಮ ದುಷ್ಕರ್ಮದ ಫಲವನ್ನು ಉಣ್ಣುವರು.
19 : 60
إِلَّا مَن تَابَ وَءَامَنَ وَعَمِلَ صَـٰلِحًا فَأُو۟لَـٰٓئِكَ يَدْخُلُونَ ٱلْجَنَّةَ وَلَا يُظْلَمُونَ شَيْـًٔا
ಆದರೆ ಪಶ್ಚಾತ್ತಾಪಪಟ್ಟವರು, ವಿಶ್ವಾಸವಿಟ್ಟವರು ಹಾಗೂ ಸತ್ಕರ್ಮವೆಸಗಿದವರು ಇದರಿಂದ ಹೊರತಾಗಿದ್ದಾರೆ. ಅವರು ಸ್ವರ್ಗವನ್ನು ಪ್ರವೇಶಿಸುವರು. ಅವರಿಗೆ ಸ್ವಲ್ಪವೂ ಅನ್ಯಾಯವಾಗುವುದಿಲ್ಲ.
19 : 61
جَنَّـٰتِ عَدْنٍ ٱلَّتِى وَعَدَ ٱلرَّحْمَـٰنُ عِبَادَهُۥ بِٱلْغَيْبِ ۚ إِنَّهُۥ كَانَ وَعْدُهُۥ مَأْتِيًّا
ಶಾಶ್ವತ ವಾಸಕ್ಕಿರುವ ಸ್ವರ್ಗೋದ್ಯಾನಗಳನ್ನು. ಇದು ಪರಮ ದಯಾಮಯನು (ಅಲ್ಲಾಹು) ತನ್ನ ದಾಸರಿಗೆ ಅದೃಶ್ಯರೂಪದಲ್ಲಿ ವಾಗ್ದಾನ ಮಾಡಿದ್ದಾಗಿದೆ. ನಿಶ್ಚಯವಾಗಿಯೂ ಅವನ ವಾಗ್ದಾನವು ಜಾರಿಯಾಗಿಯೇ ತೀರುತ್ತದೆ.
19 : 62
لَّا يَسْمَعُونَ فِيهَا لَغْوًا إِلَّا سَلَـٰمًا ۖ وَلَهُمْ رِزْقُهُمْ فِيهَا بُكْرَةً وَعَشِيًّا
ಅಲ್ಲಿ ಅವರು ಯಾವುದೇ ಅನಗತ್ಯ ಮಾತುಗಳನ್ನು ಕೇಳುವುದಿಲ್ಲ. ಶಾಂತಿ ಶಾಂತಿ ಎಂಬ ಮಾತುಗಳನ್ನಲ್ಲದೆ. ಅಲ್ಲಿ ಅವರಿಗೆ ಅವರ ಆಹಾರವನ್ನು ಮುಂಜಾನೆ ಮತ್ತು ಮುಸ್ಸಂಜೆಗಳಲ್ಲಿ ಒದಗಿಸಲಾಗುವುದು.
19 : 63
تِلْكَ ٱلْجَنَّةُ ٱلَّتِى نُورِثُ مِنْ عِبَادِنَا مَن كَانَ تَقِيًّا
ಇದೇ ನಾವು ನಮ್ಮ ದಾಸರಲ್ಲಿ ದೇವಭಯವುಳ್ಳವರಿಗೆ ಉತ್ತರಾಧಿಕಾರವಾಗಿ ನೀಡುವ ಸ್ವರ್ಗ.
19 : 64
وَمَا نَتَنَزَّلُ إِلَّا بِأَمْرِ رَبِّكَ ۖ لَهُۥ مَا بَيْنَ أَيْدِينَا وَمَا خَلْفَنَا وَمَا بَيْنَ ذَٰلِكَ ۚ وَمَا كَانَ رَبُّكَ نَسِيًّا
(ಜಿಬ್ರೀಲ್ ಹೇಳಿದರು): “ನಿಮ್ಮ ಪರಿಪಾಲಕನ (ಅಲ್ಲಾಹನ) ಆಜ್ಞೆಯಿಲ್ಲದೆ ನಾವು ಇಳಿಯುವುದಿಲ್ಲ. ನಮ್ಮ ಮುಂಭಾಗದಲ್ಲಿ, ಹಿಂಭಾಗದಲ್ಲಿ ಮತ್ತು ಅವುಗಳ ನಡುವೆಯಿರುವ ಎಲ್ಲವೂ ಅವನಿಗೆ ಸೇರಿದ್ದು. ನಿಮ್ಮ ಪರಿಪಾಲಕನು (ಅಲ್ಲಾಹು) ಮರೆಯುವವನಲ್ಲ.”
19 : 65
رَّبُّ ٱلسَّمَـٰوَٰتِ وَٱلْأَرْضِ وَمَا بَيْنَهُمَا فَٱعْبُدْهُ وَٱصْطَبِرْ لِعِبَـٰدَتِهِۦ ۚ هَلْ تَعْلَمُ لَهُۥ سَمِيًّا
ಅವನು ಭೂಮ್ಯಾಕಾಶಗಳ ಮತ್ತು ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳ ಪರಿಪಾಲಕ. ಆದ್ದರಿಂದ ಅವನನ್ನು ಮಾತ್ರ ಆರಾಧಿಸಿರಿ ಮತ್ತು ಅವನ ಆರಾಧನೆಯಲ್ಲಿ ತಾಳ್ಮೆಯಿಂದಿರಿ. ಅವನಿಗೆ ಸರಿಸಾಟಿಯಾಗಿ ಯಾರಾದರೂ ಇರುವುದು ನಿಮಗೆ ತಿಳಿದಿದೆಯೇ?
19 : 66
وَيَقُولُ ٱلْإِنسَـٰنُ أَءِذَا مَا مِتُّ لَسَوْفَ أُخْرَجُ حَيًّا
ಮನುಷ್ಯನು ಹೇಳುತ್ತಾನೆ: “ನಾನು ಸತ್ತರೆ ನನ್ನನ್ನು ಪುನಃ ಜೀವಂತಗೊಳಿಸಿ ಹೊರತರಲಾಗುತ್ತದೆಯೇ?”
19 : 67
أَوَلَا يَذْكُرُ ٱلْإِنسَـٰنُ أَنَّا خَلَقْنَـٰهُ مِن قَبْلُ وَلَمْ يَكُ شَيْـًٔا
ಆದರೆ ಮನುಷ್ಯನಿಗೆ ಅಸ್ತಿತ್ವವೇ ಇಲ್ಲದಿದ್ದಾಗ ನಾವು ಅವನನ್ನು ಪ್ರಥಮ ಬಾರಿ ಸೃಷ್ಟಿಸಿದ್ದು ಅವನಿಗೆ ನೆನಪಿಲ್ಲವೇ?
19 : 68
فَوَرَبِّكَ لَنَحْشُرَنَّهُمْ وَٱلشَّيَـٰطِينَ ثُمَّ لَنُحْضِرَنَّهُمْ حَوْلَ جَهَنَّمَ جِثِيًّا
ನಿಮ್ಮ ಪರಿಪಾಲಕನ (ಅಲ್ಲಾಹನ) ಮೇಲಾಣೆ! ನಾವು ಖಂಡಿತವಾಗಿಯೂ ಅವರನ್ನು ಮತ್ತು ಶೈತಾನರನ್ನು ಒಟ್ಟುಗೂಡಿಸಿ, ನಂತರ ಅವರನ್ನು ಮೊಣಕಾಲೂರಿದ ಸ್ಥಿತಿಯಲ್ಲಿ ನರಕದ ಸುತ್ತಲೂ ಹಾಜರುಪಡಿಸುವೆವು.
19 : 69
ثُمَّ لَنَنزِعَنَّ مِن كُلِّ شِيعَةٍ أَيُّهُمْ أَشَدُّ عَلَى ٱلرَّحْمَـٰنِ عِتِيًّا
ನಂತರ ಎಲ್ಲಾ ಗುಂಪುಗಳಿಂದಲೂ ಪರಮ ದಯಾಮಯನಿಗೆ (ಅಲ್ಲಾಹನಿಗೆ) ಕಡು ದ್ರೋಹವೆಸಗಿದವರನ್ನು ಎಳೆದು ಬೇರ್ಪಡಿಸುವೆವು.
19 : 70
ثُمَّ لَنَحْنُ أَعْلَمُ بِٱلَّذِينَ هُمْ أَوْلَىٰ بِهَا صِلِيًّا
ನಂತರ ನರಕದಲ್ಲಿ ಉರಿಯಲು ಅವರಲ್ಲಿ ಅತ್ಯಂತ ಅರ್ಹರು ಯಾರೆಂದು ನಮಗೆ ಬಹಳ ಚೆನ್ನಾಗಿ ತಿಳಿದಿದೆ.
19 : 71
وَإِن مِّنكُمْ إِلَّا وَارِدُهَا ۚ كَانَ عَلَىٰ رَبِّكَ حَتْمًا مَّقْضِيًّا
ನಿಮ್ಮಲ್ಲಿ ಪ್ರತಿಯೊಬ್ಬರೂ ಅದರ (ನರಕದ) ಬಳಿಗೆ ಬರುವರು. ಅದು ತಮ್ಮ ಪರಿಪಾಲಕನ (ಅಲ್ಲಾಹನ) ಖಚಿತ ಹಾಗೂ ಬದಲಾವಣೆಯಿಲ್ಲದ ತೀರ್ಮಾನವಾಗಿದೆ.[1]
19 : 72
ثُمَّ نُنَجِّى ٱلَّذِينَ ٱتَّقَوا۟ وَّنَذَرُ ٱلظَّـٰلِمِينَ فِيهَا جِثِيًّا
ನಂತರ ನಾವು ದೇವಭಯವುಳ್ಳವರನ್ನು ರಕ್ಷಿಸಿ, ಅಕ್ರಮವೆಸಗಿದವರನ್ನು ಮೊಣಕಾಲೂರಿದ ಸ್ಥಿತಿಯಲ್ಲಿ ಅಲ್ಲೇ ಬಿಟ್ಟುಬಿಡುವೆವು.
19 : 73
وَإِذَا تُتْلَىٰ عَلَيْهِمْ ءَايَـٰتُنَا بَيِّنَـٰتٍ قَالَ ٱلَّذِينَ كَفَرُوا۟ لِلَّذِينَ ءَامَنُوٓا۟ أَىُّ ٱلْفَرِيقَيْنِ خَيْرٌ مَّقَامًا وَأَحْسَنُ نَدِيًّا
ನಮ್ಮ ಸ್ಪಷ್ಟ ಸಾಕ್ಷ್ಯಾಧಾರಗಳನ್ನು ಅವರಿಗೆ ಓದಿಕೊಡಲಾದರೆ, ಸತ್ಯನಿಷೇಧಿಗಳು ಸತ್ಯವಿಶ್ವಾಸಿಗಳೊಡನೆ ಹೇಳುತ್ತಾರೆ: “ಸ್ಥಾನಮಾನ ಮತ್ತು ಜನಬಲದ ದೃಷ್ಟಿಯಲ್ಲಿ ನಮ್ಮ ಈ ಎರಡು ಗುಂಪುಗಳಲ್ಲಿ ಯಾರು ಶ್ರೇಷ್ಠರು?”[1]
19 : 74
وَكَمْ أَهْلَكْنَا قَبْلَهُم مِّن قَرْنٍ هُمْ أَحْسَنُ أَثَـٰثًا وَرِءْيًا
ನಾವು ಅವರಿಗಿಂತ ಮೊದಲು ಎಷ್ಟೋ ತಲೆಮಾರುಗಳನ್ನು ನಾಶ ಮಾಡಿದ್ದೇವೆ. ಅವರು ಸವಲತ್ತುಗಳು ಮತ್ತು ದೇಹದಾರ್ಢ್ಯದಲ್ಲಿ ಇವರಿಗಿಂತಲೂ ಶ್ರೇಷ್ಠರಾಗಿದ್ದರು.
19 : 75
قُلْ مَن كَانَ فِى ٱلضَّلَـٰلَةِ فَلْيَمْدُدْ لَهُ ٱلرَّحْمَـٰنُ مَدًّا ۚ حَتَّىٰٓ إِذَا رَأَوْا۟ مَا يُوعَدُونَ إِمَّا ٱلْعَذَابَ وَإِمَّا ٱلسَّاعَةَ فَسَيَعْلَمُونَ مَنْ هُوَ شَرٌّ مَّكَانًا وَأَضْعَفُ جُندًا
ಹೇಳಿರಿ: “ಯಾರು ದುರ್ಮಾರ್ಗದಲ್ಲಿದ್ದಾನೋ ಅವನಿಗೆ ಪರಮ ದಯಾಮಯನು (ಅಲ್ಲಾಹು) ಅವಧಿಯನ್ನು ವಿಸ್ತರಿಸಿಕೊಡಲಿ. ಎಲ್ಲಿಯವರೆಗೆಂದರೆ, ಅವರು ತಮಗೆ ಎಚ್ಚರಿಕೆ ನೀಡಲಾದ ಸಂಗತಿಯನ್ನು—ಅಂದರೆ ಒಂದೋ ಶಿಕ್ಷೆಯನ್ನು ಅಥವಾ ಅಂತ್ಯಸಮಯವನ್ನು—ಕಾಣುವಾಗ, ಅತಿನಿಕೃಷ್ಟ ಸ್ಥಾನಮಾನವಿರುವವರು ಮತ್ತು ಅತಿ ದುರ್ಬಲ ಜನಬಲವು ಯಾರದ್ದೆಂದು ಅವರು ಬಹಳ ಚೆನ್ನಾಗಿ ತಿಳಿಯುವರು.”
19 : 76
وَيَزِيدُ ٱللَّهُ ٱلَّذِينَ ٱهْتَدَوْا۟ هُدًى ۗ وَٱلْبَـٰقِيَـٰتُ ٱلصَّـٰلِحَـٰتُ خَيْرٌ عِندَ رَبِّكَ ثَوَابًا وَخَيْرٌ مَّرَدًّا
ಸನ್ಮಾರ್ಗದಲ್ಲಿರುವವರಿಗೆ ಅಲ್ಲಾಹು ಸನ್ಮಾರ್ಗವನ್ನು ಹೆಚ್ಚಿಸಿಕೊಡುವನು. ಆದರೆ ಬಾಕಿಯಾಗುವ ಸತ್ಕರ್ಮಗಳು ತಮ್ಮ ಪರಿಪಾಲಕನ (ಅಲ್ಲಾಹನ) ದೃಷ್ಟಿಯಲ್ಲಿ ಅತ್ಯುತ್ತಮ ಪ್ರತಿಫಲವನ್ನು ಮತ್ತು ಅತ್ಯುತ್ತಮ ಫಲಿತಾಂಶವನ್ನು ಹೊಂದಿವೆ.
19 : 77
أَفَرَءَيْتَ ٱلَّذِى كَفَرَ بِـَٔايَـٰتِنَا وَقَالَ لَأُوتَيَنَّ مَالًا وَوَلَدًا
ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದವನನ್ನು ನೀವು ನೋಡಿದ್ದೀರಾ?[1] ಅವನು ಹೇಳಿದನು: “ನನಗೆ ಖಂಡಿತ ಸಂಪತ್ತು ಮತ್ತು ಸಂತಾನವನ್ನು ನೀಡಲಾಗುತ್ತದೆ.”
19 : 78
أَطَّلَعَ ٱلْغَيْبَ أَمِ ٱتَّخَذَ عِندَ ٱلرَّحْمَـٰنِ عَهْدًا
ಅವನು ಅದೃಶ್ಯ ವಿಷಯಗಳನ್ನು ತಿಳಿದುಕೊಂಡನೇ? ಅಥವಾ ಪರಮ ದಯಾಮಯನ (ಅಲ್ಲಾಹನ) ಬಳಿ ಯಾವುದಾದರೂ ಕರಾರು ಮಾಡಿದ್ದಾನೆಯೇ?
19 : 79
كَلَّا ۚ سَنَكْتُبُ مَا يَقُولُ وَنَمُدُّ لَهُۥ مِنَ ٱلْعَذَابِ مَدًّا
ಖಂಡಿತ ಇಲ್ಲ, ಅವನು ಹೇಳುವುದನ್ನು ನಾವು ದಾಖಲಿಸಿಡುತ್ತೇವೆ ಮತ್ತು ಅವನಿಗೆ ಶಿಕ್ಷೆಯನ್ನು ಹೆಚ್ಚಿಸುತ್ತಲೇ ಇರುತ್ತೇವೆ.
19 : 80
وَنَرِثُهُۥ مَا يَقُولُ وَيَأْتِينَا فَرْدًا
ಅವನು ಹೇಳುತ್ತಿರುವ ವಿಷಯಗಳನ್ನು (ಸಂಪತ್ತು ಮತ್ತು ಸಂತಾನವನ್ನು) ಅವನ ಮರಣಾನಂತರ ನಾವು ಉತ್ತರಾಧಿಕಾರವಾಗಿ ಪಡೆಯುವೆವು. ಅವನು ನಮ್ಮ ಬಳಿಗೆ ಒಂಟಿಯಾಗಿಯೇ ಬರುವನು.
19 : 81
وَٱتَّخَذُوا۟ مِن دُونِ ٱللَّهِ ءَالِهَةً لِّيَكُونُوا۟ لَهُمْ عِزًّا
ಅವರು ಅಲ್ಲಾಹನನ್ನು ಬಿಟ್ಟು ಬೇರೆ ದೇವರುಗಳನ್ನು ಸ್ವೀಕರಿಸಿದ್ದಾರೆ. ಅವರಿಂದ ಇವರಿಗೆ ಪ್ರತಿಷ್ಠೆಯುಂಟಾಗಲು!
19 : 82
كَلَّا ۚ سَيَكْفُرُونَ بِعِبَادَتِهِمْ وَيَكُونُونَ عَلَيْهِمْ ضِدًّا
ಖಂಡಿತ ಇಲ್ಲ, (ಪುನರುತ್ಥಾನ ದಿನದಂದು) ಅವರು ಇವರು ಮಾಡಿದ ಆರಾಧನೆಗಳನ್ನು ನಿಷೇಧಿಸುವರು ಮತ್ತು ಇವರಿಗೆ ವಿರುದ್ಧವಾಗಿ ನಿಲ್ಲುವರು.
19 : 83
أَلَمْ تَرَ أَنَّآ أَرْسَلْنَا ٱلشَّيَـٰطِينَ عَلَى ٱلْكَـٰفِرِينَ تَؤُزُّهُمْ أَزًّا
ನಾವು ಸತ್ಯನಿಷೇಧಿಗಳ ಬಳಿಗೆ, ಅವರನ್ನು ಉತ್ತೇಜಿಸಲು ಶೈತಾನರನ್ನು ಕಳುಹಿಸಿದ್ದನ್ನು ನೀವು ನೋಡಿಲ್ಲವೇ?
19 : 84
فَلَا تَعْجَلْ عَلَيْهِمْ ۖ إِنَّمَا نَعُدُّ لَهُمْ عَدًّا
ಆದ್ದರಿಂದ ಅವರ ವಿಷಯದಲ್ಲಿ ತ್ವರೆ ಮಾಡಬೇಡಿ. ನಾವು ಸ್ವತಃ ಅವರಿಗೆ ಅವಧಿಯನ್ನು ಎಣಿಸುತ್ತಿದ್ದೇವೆ!
19 : 85
يَوْمَ نَحْشُرُ ٱلْمُتَّقِينَ إِلَى ٱلرَّحْمَـٰنِ وَفْدًا
ನಾವು ದೇವಭಯವುಳ್ಳವರನ್ನು ಪರಮ ದಯಾಮಯನ (ಅಲ್ಲಾಹನ) ಬಳಿಯಲ್ಲಿ ಗಣ್ಯ ಅತಿಥಿಗಳಾಗಿ ಒಟ್ಟುಗೂಡಿಸುವ ದಿನ!
19 : 86
وَنَسُوقُ ٱلْمُجْرِمِينَ إِلَىٰ جَهَنَّمَ وِرْدًا
ನಾವು ಅಪರಾಧಿಗಳನ್ನು ಅತಿಯಾಗಿ ಬಾಯಾರಿದ ಸ್ಥಿತಿಯಲ್ಲಿ ನರಕಕ್ಕೆ ಸಾಗಿಸುವೆವು.
19 : 87
لَّا يَمْلِكُونَ ٱلشَّفَـٰعَةَ إِلَّا مَنِ ٱتَّخَذَ عِندَ ٱلرَّحْمَـٰنِ عَهْدًا
ಪರಮ ದಯಾಮಯನಿಂದ (ಅಲ್ಲಾಹನಿಂದ) ಸ್ಪಷ್ಟ ಕರಾರು ಪಡೆದವರಿಗಲ್ಲದೆ ಇನ್ನಾರಿಗೂ ಅಂದು ಶಿಫಾರಸು ಮಾಡುವ ಅಧಿಕಾರವಿಲ್ಲ.[1]
19 : 88
وَقَالُوا۟ ٱتَّخَذَ ٱلرَّحْمَـٰنُ وَلَدًا
ಅವರು ಹೇಳಿದರು: “ಪರಮ ದಯಾಮಯನಿಗೆ (ಅಲ್ಲಾಹನಿಗೆ) ಒಬ್ಬ ಪುತ್ರನಿದ್ದಾನೆ.”
19 : 89
لَّقَدْ جِئْتُمْ شَيْـًٔا إِدًّا
ನಿಶ್ಚಯವಾಗಿಯೂ ನೀವು ಒಂದು ಘೋರ ಸಂಗತಿಯನ್ನೇ ತಂದಿದ್ದೀರಿ.
19 : 90
تَكَادُ ٱلسَّمَـٰوَٰتُ يَتَفَطَّرْنَ مِنْهُ وَتَنشَقُّ ٱلْأَرْضُ وَتَخِرُّ ٱلْجِبَالُ هَدًّا
ಅದರಿಂದ ಇನ್ನೇನು ಆಕಾಶಗಳು ಒಡೆದು ಛಿದ್ರವಾಗಿ, ಭೂಮಿ ಬಿರುಕು ಬಿಟ್ಟು, ಪರ್ವತಗಳು ಪುಡಿಪುಡಿಯಾಗಿ ಬೀಳಬಹುದು.
19 : 91
أَن دَعَوْا۟ لِلرَّحْمَـٰنِ وَلَدًا
ಪರಮ ದಯಾಮಯನಿಗೆ (ಅಲ್ಲಾಹನಿಗೆ) ಒಬ್ಬ ಪುತ್ರನಿದ್ದಾನೆಂದು ಅವರು ವಾದಿಸಿದ ಕಾರಣ.
19 : 92
وَمَا يَنۢبَغِى لِلرَّحْمَـٰنِ أَن يَتَّخِذَ وَلَدًا
ಒಬ್ಬ ಪುತ್ರನಿರುವುದು ಪರಮ ದಯಾಮಯನಿಗೆ (ಅಲ್ಲಾಹನಿಗೆ) ಯೋಗ್ಯವಾದುದಲ್ಲ.
19 : 93
إِن كُلُّ مَن فِى ٱلسَّمَـٰوَٰتِ وَٱلْأَرْضِ إِلَّآ ءَاتِى ٱلرَّحْمَـٰنِ عَبْدًا
ಭೂಮ್ಯಾಕಾಶಗಳಲ್ಲಿರುವ ಎಲ್ಲರೂ ಪರಮ ದಯಾಮಯನ (ಅಲ್ಲಾಹನ) ಬಳಿಗೆ ದಾಸರಾಗಿರುವ ಸ್ಥಿತಿಯಲ್ಲೇ ಬರುವರು.
19 : 94
لَّقَدْ أَحْصَىٰهُمْ وَعَدَّهُمْ عَدًّا
ಅವನಿಗೆ ಅವರ ಸಂಖ್ಯೆಯ ಬಗ್ಗೆ ಪೂರ್ಣ ಮಾಹಿತಿಯಿದೆ ಮತ್ತು ಅವನು ಅವರೆಲ್ಲರನ್ನೂ ನಿಖರವಾಗಿ ಎಣಿಸಿಟ್ಟಿದ್ದಾನೆ.
19 : 95
وَكُلُّهُمْ ءَاتِيهِ يَوْمَ ٱلْقِيَـٰمَةِ فَرْدًا
ಪುನರುತ್ಥಾನ ದಿನದಂದು ಅವರೆಲ್ಲರೂ ಅವನ ಬಳಿಗೆ ಏಕಾಂಗಿಯಾಗಿ ಬರುವರು.
19 : 96
إِنَّ ٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ سَيَجْعَلُ لَهُمُ ٱلرَّحْمَـٰنُ وُدًّا
ನಿಶ್ಚಯವಾಗಿಯೂ, ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ—ಅವರಿಗೆ ಪರಮ ದಯಾಮಯನು (ಅಲ್ಲಾಹು) ಪ್ರೀತಿಯನ್ನು ಉಂಟುಮಾಡುವನು.[1]
19 : 97
فَإِنَّمَا يَسَّرْنَـٰهُ بِلِسَانِكَ لِتُبَشِّرَ بِهِ ٱلْمُتَّقِينَ وَتُنذِرَ بِهِۦ قَوْمًا لُّدًّا
ನಿಶ್ಚಯವಾಗಿಯೂ, ನಾವು ಇದನ್ನು (ಕುರ್‌ಆನನ್ನು) ನಿಮ್ಮ ಭಾಷೆಯಲ್ಲಿಯೇ ಸುಲಭಗೊಳಿಸಿದ್ದೇವೆ. ನೀವು ಇದರ ಮೂಲಕ ದೇವಭಯವುಳ್ಳವರಿಗೆ ಸುವಾರ್ತೆಯನ್ನು ನೀಡಲು ಮತ್ತು ಹಿಂಸಾವಾದಿ ಜನರಿಗೆ ಇದರ ಮೂಲಕ ಎಚ್ಚರಿಕೆಯನ್ನು ನೀಡಲು.
19 : 98
وَكَمْ أَهْلَكْنَا قَبْلَهُم مِّن قَرْنٍ هَلْ تُحِسُّ مِنْهُم مِّنْ أَحَدٍ أَوْ تَسْمَعُ لَهُمْ رِكْزًۢا
ನಾವು ಅವರಿಗಿಂತ ಮೊದಲು ಎಷ್ಟೋ ತಲೆಮಾರುಗಳನ್ನು ನಾಶ ಮಾಡಿದ್ದೇವೆ. ನೀವು ಅವರಲ್ಲಿ ಯಾರಾದರೊಬ್ಬರನ್ನು ಕಾಣುತ್ತಿದ್ದೀರಾ? ಅಥವಾ ಅವರ ಕೀರಲು ಧ್ವನಿಯನ್ನು ಕೇಳುತ್ತಿದ್ದೀರಾ?